ಗ್ರೇವೀ, ಫ್ರಾಂಕಾಯ್ ಪಾಲ್ ಜೂಲ್ಸ್

1807 - 1891. ಫ್ರೆಂಚ್ ರಾಜಕಾರಣಿ. 1807 ಆಗಸ್ಟ್‍ರ 15 ರಂದು ಮಾಂಟ್-ಸೌಸ್- ವಾಡ್ರೆ ಯಲ್ಲಿ ಜನಿಸಿದ. ಪ್ಯಾರಿಸಿನಲ್ಲಿ ನ್ಯಾಯಪದವಿ ಗಳಿಸಿ ಅಲ್ಲಿಯ ನ್ಯಾಯವಾದಿಯಾಗಿ ಜೀವನವನ್ನಾರಂಭಿಸಿದ. ಈತ ಲೂಯಿ ಫಿಲಿಪ್ಪನ ವಿರೋಧಿಯಾಗಿದ್ದ. 1848ರಲ್ಲಿ ಜûುರ ಕ್ಷೇತ್ರದಿಂದ ಸಂವಿಧಾನ ಸಭೆಗೆ ಆಯ್ಕೆಹೊಂದಿ ಅಲ್ಲಿ 3ನೆಯ ನೆಪೋಲಿಯನನ ನೀತಿಯನ್ನು ವಿರೋಧಿಸಿದ. ಗ್ರೇವೀ 3ನೆಯ ನೆಪೋಲಿಯನನ ಆಧಿಪತ್ಯದಲ್ಲಿ ಆಗಲಿದ್ದ ಎರಡನೆಯ ರಿಪಬ್ಲಿಕ್ ರಚನೆಯನ್ನು ವಿರೋಧಿಸಿದ. ಈತ ಸಂವಿಧಾನ ಸಭೆಯಲ್ಲಿ ತೀವ್ರಸ್ವರೂಪದ ತಿದ್ದಪಡಿಗಳನ್ನು ಸೂಚಿಸಿದ. ಎರಡನೆಯ ರಿಪಬ್ಲಿಕ್‍ಗೆ ಅಧ್ಯಕ್ಷನೇ ಇರಕೂಡದೆಂದು ಕೂಡ ಸೂಚಿಸಿದ. ಒಂದು ವೇಳೆ ಅಂಥ ಅಧ್ಯಕ್ಷನಿದ್ದರೆ ಅವನನ್ನು ಆಯ್ಕೆ ಮಾಡುವ ಮತ್ತು ಪದಚ್ಯುತಿಗೊಳಿಸುವ ಅಧಿಕಾರ ಸಭೆಗೇ ಇರಬೇಕೆಂದು ಇವನು ಸಲಹೆ ಮಾಡಿದ. ಆದರೆ ಈ ಸಲಹೆ ಸಂಪೂರ್ಣವಾಗಿ ಕಾರ್ಯಗತವಾಗಲಿಲ್ಲ. 1851ರಲ್ಲಿ ಈತ ದಸ್ತಗಿರಿಯಾದ. ಅನಂತರ 1868ರ ವರೆಗೂ ಇವನು ರಾಜಕೀಯವನ್ನು ಪ್ರವೇಶಿಸಲಿಲ್ಲ. ನ್ಯಾಯವಾದಿ ವೃತ್ತಿಯಲ್ಲೆ ಮುಂದುವರಿದ.

1868ರಲ್ಲಿ ಚೇಂಬರಿಗೆ ಗ್ರೇವಿಯ ಆಯ್ಕೆಯಾಯಿತು. ಮಿತಗಾಮಿ ರಿಪಬ್ಲಿಕ್‍ನನಾಗಿ ಈತ ಅದರಲ್ಲಿ ಭಾಗವಹಿಸಿದ. 1871ರಲ್ಲಿ ಇವನು ರಾಷ್ಟ್ರೀಯ ಸಭೆಯ ಅಧ್ಯಕ್ಷನಾಗಿ ಆಯ್ಕೆಯಾದ. 1876 ರಿಂದ 1879 ರ ವರೆಗೆ ಈತ ರಾಷ್ಟ್ರೀಯ ಸಭೆಯ ಅಧ್ಯಕ್ಷನಾಗಿದ್ದ.

1879ರ ಜನವರಿ 30 ರಂದು ಅಧ್ಯಕ್ಷ ಮಾರ್ಷಲ್ ಮೆಕ್‍ಮೋಹನ್ ರಾಜೀನಾಮೆ ನೀಡಿದಾಗ ಗಣರಾಜ್ಯದ ಅಧ್ಯಕ್ಷನಾಗಿ ಈತ ಚುನಾಯಿತನಾದ. ಈ ಕಾಲದಲ್ಲಿ ಇವನು ಒಳ್ಳೆಯ ಹೆಸರು ಸಂಪಾದಿಸಿದ. ಆದ್ದರಿಂದ 1885ರ ಡಿಸೆಂಬರಿನಲ್ಲಿ ಮತ್ತೆ ಏಳು ವರ್ಷಗಳ ಅವಧಿಗೆ ಅಧ್ಯಕ್ಷನಾಗಿ ಚುನಾಯಿತನಾದ. ಇವನ ಅಳಿಯ ಡ್ಯಾನಿಯಲ್ ವಿಲ್ಸನ್ ಲೀಜಿಯನ್ ಆಫ್ ಆನರ್ ಎಂಬ ಗೌರವ ಪದವಿಗಳ ನೀಡಿಕೆಯ ದುವ್ರ್ಯಾಪಾರದಲ್ಲಿ ನಿರತನಾಗಿದ್ದನೆಂಬ ಕಾರಣದಿಂದಾಗಿ ಇವನಿಗೂ ಕಳಂಕ ಅಂಟಿಕೊಂಡಿತು. ಈತ ಅಳಿಯನನ್ನು ಸಮರ್ಥಿಸುವ ನಿಲುವು ತಳೆದ. ಇವನ ಮಂತ್ರಿಮಂಡಲ ರಚಿಸಲು ಯಾರೂ ಒಪ್ಪಲಿಲ್ಲ. ಚೇಂಬರ್ ಕೂಡ ಇವನ ಬಗ್ಗೆ ಸರಿಯಾದ ಧೋರಣೆ ತಳೆಯಲಿಲ್ಲ. ಆದ್ದರಿಂದ ಈತ ರಾಜೀನಾಮೆ ನೀಡಬೇಕಾಯಿತು. ಈತ ತನ್ನ ಅಧಿಕಾರವನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡನೆಂದೂ ತನ್ನ ಕುಟುಂಬದ ಮೇಲೆ ಅಂಧಾಭಿಮಾನ ಹೊಂದಿದ್ದನೆಂದೂ ಆಪಾದನೆಗೆ ಗುರಿಯಾದ. ಈತ 1891ರ ಸೆಪ್ಟೆಂಬರ್ 9 ರಂದು ತನ್ನ ಜನ್ಮ ಸ್ಥಳದಲ್ಲಿ ನಿಧನ ಹೊಂದಿದ.				(ಎನ್.ಎ.ಎಚ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ